ನಿಡುದಲೆಗ
ಉದ್ದ ತಲೆ ಇರುವ ವ್ಯಕ್ತಿ. ನಿಡುದಲೆ ಎಂದರೆ ತಲೆಯ ಮೇಲ್ಬಾಗ ಒಂದು ಮುಂದಕ್ಕೆ ಉದ್ದವಾಗಿರುವುದು. ಮಾನವಶಾಸ್ತ್ರದಲ್ಲಿ ನಿಡುದಲೆಸ್ಥಿತಿಯನ್ನು ಹೀಗೆ ನಿರ್ಧರಿಸಲಾಗಿದೆ: ತಲೆಬುರುಡೆಯ ಹಿಂದು ಮುಂದಿನ ವ್ಯಾಸ 100 ಏಕಮಾನಗಳಿದ್ದರೆ ಅಡ್ಡವ್ಯಾಸ 75 ಏಕಮಾನಗಳಿಗಿಂತ ಅಂದರೆ ಅಗಲ ಉದ್ದದ ಮುಕ್ಕಾಲು ಭಾಗಕ್ಕಿಂತ ಕಡಿಮೆ ಇರಬೇಕು. ಈ ಸ್ಥಿತಿಯಲ್ಲಿ ತಲೆಯ ಉದ್ದದಲ್ಲಿ ಅಗಲದ ಶತಾಂಶ ತೋರಿಸುವ ಕಪಾಲಸೂಚಕ 75 ಅಥವಾ ಕಡಿಮೆ ಇರುವುದು. ಪ್ರಸೂತಿಶಾಸ್ತ್ರದಲ್ಲಿ ನಿಡುದಲೆ ಎಂದರೆ ವಿಳಂಬಿತ ಹಾಗೂ ಕಷ್ಟಕರವಾದ ಹೆರಿಗೆಯಲ್ಲಿ ಮಗುವಿನ ತಲೆ ಪ್ರಸವಮಾರ್ಗದಲ್ಲಿ ಸಿಕ್ಕಿಕೊಂಡು ತಾತ್ಕಾಲಿಕವಾಗಿ ಉದ್ದವಾಗಿರುವುದು. ಇದು ಮಗು ಹುಟ್ಟಿದ ಮೇಲೆ ತಾನಾಗಿಯೇ ಸರಿಹೋಗುವುದು. 
         							 (ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ